ಅವಳಿಗಾಗಿ ನಾನು ಕಾದು ಕುಳಿತಿದ್ದೆ. ಅದು ಮಳೆಗಾಲದ ದಿನಗಳು... ಅವಳು, ಇಂದು ಭೇಟಿ ಆಗುತ್ತೇನೆ ಎಂದು ಕರೆ ಮಾಡಿ ಹೇಳಿದಳು.. ಸೂರ್ಯ ತನ ದಿನ ನಿತ್ಯದ ಕೆಲಸ ಮುಗಿಸಿ ಉಷೆಗೆ ಕೆಂಪು ಪೌಡರ್ ಹಚ್ಚಿ ಬೆಳಕಿನ ರಂಗಿನಾಟ ಮುಗಿಸಿ ಮೆಲ್ಲಮೆಲ್ಲಗೆ ದೂರ ದಿಗಂತದಿ ಜಾರಿಕೊಂಡ...ಬಹು ದೂರದಲ್ಲಿ ಕಪ್ಪು ಮೋಡಗಳು ಮಳೆ ಹನಿಗಳ ತುಂಬಿಕೊಂಡು, ಗರ್ಭಿಣಿಯಂತೆ ಹೆಜ್ಜೆ ಇಡುತ್ತ, ಮುಗಿಲ ಸರೋವರದಿ ಒಮ್ಮೆಗೆ ಧಾವಿಸಿದವು. ಬೀಸುತಿದ್ದ ಗಾಳಿಯ ರಭಸಕ್ಕೆ ಅಲ್ಲೊಂದು ಇಲ್ಲೊಂದು ಪುಟ್ಟ ಹಕ್ಕಿಗಳು ತಮ್ಮ ಗೂಡು ಸೇರಿಕೊಳ್ಳಲಾರಂಭಿಸಿದವು .ದಿಟ್ಟ ಕಾಗೆಯೊಂದು ಗಾಳಿಯ ರಭಸದೆಡೆಗೆ ಸೂತ್ರ ಮುರಿದ ಗಾಳಿಪಟದ ಹಾಗೆ ಅತ್ತಿತ್ತ ತೇಲುತ್ತ ಮುಂದೆ ಹಾರಿತು … ಎಷ್ಟು ಸಮಯವಾದರೂ ಅವಳ ಸುಳಿವು ಇರಲಿಲ್ಲ, ಬೀದಿಯ ಕಡೆ ನೋಡಿದರೂ ಅವಳು ಬರುವ ಮುನ್ಸೂಚನೆ ಇರಲಿಲ್ಲ. ತಕ್ಷಣಕ್ಕೆ ಗುಡುಗಿನ ಶಬ್ದ ಕೇಳಿ ಬಂತು. ತಲೆಯೆತ್ತಿ ಮೇಲೆ ನೋಡಿದೆ. ಮೋಡಗಳ ಗರ್ಭದಿಂದ ಭಾವದ್ಗೊನನವಾದ ಮೊದಲ ಮಳೆ ಹನಿ ನನ್ನ ಕಣ್ಣ ರೆಪ್ಪೆ ಮೇಲೆ ಬಂದು ತಾಕಿತು. ಪುಟ್ಟ ಮಗುವಿನ ಹಾಗೆ ಕಣ್ಣ ಉಜ್ಜಿಕೊಂಡು ತಲೆ ಎತ್ತಿದೆ, ಇದಕ್ಕಿದ್ದ ಹಾಗೆ ಅಸಂಖ್ಯಾತ , ಕೋಟಿ ಕೋಟಿ ಮಳೆ ಹನಿಗಳ ರಾಶಿ ಒಮ್ಮೆಗೆ ಭೂಮಿಯೆಡೆಗೆ ಧಾವಿಸಿದವು, ಚಿಟರ್ ಪಟರ್ ಎಂದು ಸದ್ದು ಮಾಡುತ್ತ ವಾತಾವರಣದಿ ತುಂಬಿದ ಮೌನವ ಮುರಿದವು. ಎಲೋ ಅಡಗಿ ಕುಳಿತ್ತಿದ ಕಪ್ಪೆ ಮರಿಗಳ ಸೈನ್ಯ ಮಳೆ ಹನಿಗಳ ರಾಶಿ ಅಪ್ಪಳಿಸುತ್ತಿದ ಹಾಗೆ ಕುಪ್ಪಳಿಸುತ್ತ ಬರ ತೊಡಗಿದವು. ಮನಸಲ್ಲಿ ಅದೇನೋ ಒಂದು ಕಂಪನ, ಮತ್ತೆ ತಲೆ ಎತ್ತಿ ನೋಡಿದೆ, ಹಕ್ಕಿಯ ಪುಕ್ಕ ಗಾಳಿಯಲಿ ತೇಲಿ ಬರುವ ಹಾಗೆ ನನ್ನವಳು, ನೆಲ ಎಲ್ಲಿ ಸವಿದಿತ್ತು ಎನ್ನುವ ಹಾಗೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ, ಒದ್ದೆ ಮುದ್ದೆಯಾಗಿ ಯಾವುದೊ ಹಳೆ ಕಾಲದ ಛತ್ರಿ ಹಿಡಿದುಕೊಂಡು ನನ್ನೆಡೆಗೆ ಬರುತಿದಳು… ನನ್ನ ಮುಖ ನೋಡಿ ನಸು ನಕ್ಕು ತಲೆ ಬಾಗಿಸಿ ಅಪ್ಪಿಕೊಳ್ಳುವ ನೆಪದಲ್ಲಿ ಎಡವಿ ನನ್ನೆದೆಯ 30-40 ಸೈಟ್ ಮೇಲೆ ಬಿದ್ದು ಅಪ್ಪಿಕೊಂಡು ನಿಂತಳು...
ನಮ್ಮಿಬರ ನಡುವೆ ಬರಿ ಮೌನವೇ ಇತ್ತು, ಸುತ್ತಲೂ ಮಳೆ ಹನಿಯ ಶಬ್ದ, ಲೈಟ್ ಕಂಬದ ಲೈಟ್, ಮಿಂಚು ಹುಳುವಿನ ಹಾಗೆ ಮಿಣುಕಿ ಮಿಣುಕಿ ನಮ್ಮನು ಇಣುಕಿ ನೋಡುತ್ತಿದ್ದ ಅನುಭವ. ನನ್ನೆದೆಯ ಉಸಿರಾಟ ಅವಳ ಎದೆಯ ಬಡಿತ ಇವೆರಡರ ಮಿಲನದಿಂದ ನವಿರಾಗಿ, ಸ್ಪರ್ಶದಿ ಮೌನ ಜಾರಿ ನಾಚಿಕೆಯಲ್ಲಿ ತೊಯ್ದು, ಹೂವಿನ ಸ್ಪರ್ಶದಂತೆ ಇದ್ದ ಅವಳ ಮೊಗವ ಹಿಡಿದು ಮೇಲಕ್ಕೆತ್ತಿದೆ. “ ಏನಾಯ್ತು ತುಂಟಿಗೆ.ಯಾಕ್ ಹಿಂಗ್ ನಾಚ್ಕೊಂಡಿದೆ” ಎಂದೊಡನೆ ಮತ್ತೆ ನಸು ನಕ್ಕು ಚಳಿಯಿಂದ ನಡುಗುತ ಬಿಗಿದಪ್ಪಿದಳು… ತುಂಟು ತನದ ಹಲವು ಯೋಚನೆಗಳು ನನ್ನೊಳಗೆ ಸೈಕಲ್ ಹೊಡೆಯುತ್ತಿದ್ದ ಅನುಭವಗಳಿಗೆ ಏನೆಂದು ಹೇಳಲಿ… ಪುನಃ ಅವಳ ಗಲ್ಲ ಹಿಡಿದು ಎತ್ತಿದೆ, ಮಳೆ ಹನಿಯ ಒಂದು ತುಣುಕು ಅವಳ ತುಟಿಯ ಮೇಲೆ ಸ್ಥಾನ ಪಡೆದಿತ್ತು. ಆ ಹನಿಯನ್ನು ವಶಪಡಿಸಿಕೊಳ್ಳಬೇಕು ಎಂಬ ತುಂಟು ನೆವದಲ್ಲಿ ಅವಳ ಹತ್ತಿರ ಸರಿದೆ. ಏನೂ ಅರಿಯದೆ ಮುಗ್ದಳಂತೆ ಕಣ್ಣು ಮುಚ್ಚಿ ಹಿಡಿದ ಹಿಡಿತ ಬಿಗಿಯಾಗಿ ಹಿಡಿದು ಪ್ರಪಂಚ ಮರೆತವಳಂತೆ ನಿಂತಳು. ಆ ಹನಿಯನ್ನು ನನ್ನ ವಶ ಮಾಡಿಕೊಳ್ಳುವ ಹಠದಲ್ಲಿ ಮುಂದೆ ನಡೆದೆ. ಇದಕ್ಕಿದ ಹಾಗೆ ಒಮ್ಮೆಗೆ ಜೋರಾಗಿ ಗುಡುಗಿತು. ಅವಳು ಕಣ್ಣು ಬಿಟ್ಟಳು ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಮತ್ತೆ ನಕ್ಕೆವು.. ಮತ್ತೆ ಮೌನ ಅವಳ ಕಣ್ಣಂಚಿನಲ್ಲಿ ನನ್ನ ಪ್ರತಿಬಿಂಬ. ನನ್ನ ಎದೆಯ ಕತ್ತಲಲ್ಲಿ ಫ್ಯುಜ್ ಹೋಗಿ ಮತ್ತೆ ಅಂಟಿಕೊಂಡ ಬಲ್ಬ್ ಹಾಗೆ ಒಂದು ಬೆಳಕು.. ಮಳೆ ಹನಿಯ ವಶ ಪಡಿಸಿಕೊಳಬೇಕು ಎಂಬ ಮರು ಪ್ರಯತ್ನದಲ್ಲಿ ಅವಳ ಹತ್ತಿರ ಹೋದೆ, ಇಬ್ಬರೂ ಕಣ್ಣ ಮುಚ್ಚಿದೆವು, ನನ್ನ ಬುಜದ ಮೇಲೆ ಯಾರೋ ಕೈ ಇಟ್ಟ ಹಾಗೆ ಭಾಸವಾಗಿತ್ತು, ನನ್ನ ಗೆಳೆಯ ರಾಮು ಪಕ್ಕದಲ್ಲೇ ಇದ್ದ .. “ ಯಾಕೋ ಮಗ ಏನ್ ಆಯ್ತು, ಅವಳ ನೆನಪಾಯ್ತ? ಯಾಕೆ ಹಿಂಗೆ ಮೌನವಾಗಿ ಎದ್ದು ನಿಂತೆ? "ಎಂದು ಪ್ರಶ್ನೆ ಹಾಕಿದ… ಇಷ್ಟು ಹೊತ್ತು ನೆನೆದದ್ದೆಲ್ಲ ಅವಳ ನೆನಪು ಎಂದು ಅರಿವಿಗೆ ಮೂಡಿ ಬಂತು. ಅವಳು ಪ್ರತಿ ಕ್ಷಣ ನನ್ನ ಜೊತೆ ಇರುವ ಹಾಗೆ ಒಂದು ಅನುಭವ. ನಾ ಒಂಟಿ ಆಗಿದ್ದು ಬರಿ ಹೊರಗಿನ ಪ್ರಪಂಚಕ್ಕೆ, ನನ್ನ ನಗು ಮೂಢ ಜನಗಳ ನಡುವೆ ಮಾತ್ರ.. ನನ್ನ ಒಳಗಿನ ಪ್ರಪಂಚದಲ್ಲಿ ಅವಳು ಸದಾ ನನ್ನವಳು, ಅವಳು ಎಂದಿಗೂ ನನ್ನಿಂದ ದೂರವಾಗಿರಲಿಲ್ಲ. ಅವಳ ದೇಹ ಮಾತ್ರ ನನ್ನಿಂದ ಅಗಲಿ ಎರಡು ವರ್ಷವಾದರೂ, ಅವಳ ಆತ್ಮ ನನ್ನ ಜೊತೆ ಬೆಸೆದುಕೊಂಡಿದೆ… ಕೆಲವು ಕಣ್ಣೀರಿನ ಹನಿಗಳನ್ನು ಹೊರ ಚಿಮ್ಮಿ, ಗಾಳಿಯಲಿ ಅವಳ ಕೈ ಹಿಡಿದು ಮನೆಯ ಕಡೆಗೆ ನಡೆದೆ……
ಇಂತಿ ನೆನಪುಗಳ ಮರೆಯಲ್ಲಿ,
ನಾನ್ಯಾರೋ..
No comments:
Post a Comment