Sunday, April 6, 2014

ಮುತ್ತುಗ ಹೂವು


ಮುತ್ತುಗ ಹೂವು ಅಥವಾ ಬ್ರಹ್ಮವೃಕ್ಷ , ಕಾಡಿನಲ್ಲಿ ನನಗೆ ಬಹಳ ಇಷ್ಟವಾದ ಹೂವು ಇದು, ಇದರ ಹಿಂದೆ ಒಂದು ಪುರಾಣ ಕಥೆ ಇದೆ ಅಂತ ಗೊತ್ತಾಗಿದು ಬಂಡೀಪುರ ಕಾಡಿನ ಹತ್ತಿರ ಇರುವ ಸಣ್ಣ ಊರಿನಿಂದ. ಮೊದಲು ಬಾರಿ ಕಾಡಿಗೆ ಹೋದವರು ಈ ಹೂವು ಕೆಳಗೆ ಬಿದ್ದು ಹರಡಿರುವ ರಾಶಿ ನೋಡಿದಾಗ, ಬೆಂಕಿ ಹಚ್ಚಿರುವ ಹಾಗೆ ಭಾಸವಾಗುತದೆ. ಕಾಡಿನ ದಾರಿಯಲಿ ಈ ಅಜ್ಜಿ ಬ್ರಹ್ಮವೃಕ್ಷ ಮರದ ಕೆಳಗೆ ಕುಳಿತ್ತು, ಅದರ ಎಲೆಗಳನ್ನು ಹೆಣೆಯುವ ದೃಶ್ಯ ಕಂಡು ಕೊಂಚ ಕುತುಹಲ ಮೂಡಿಸಿತ್ತು. ಹತ್ತಿರ ಹೋಗಿ ವಿಚಾರಿಸಿ ಎಲೆಗಳನ್ನು ಕಂಡಾಗ ಅವು ಹಳ್ಳಿಗಳಲ್ಲಿ ಮತ್ತು ದೇವಸ್ತಾನದಲ್ಲಿ ಪ್ರಸಾದ ಕೊಡುವಾಗ ಉಪಯೋಗಿಸುವ ಎಲೆ ಎಂದು ಕಂಡು ಖುಷಿಯಾದೆ. ಅಜ್ಜಿ ಮತ್ತೊಂದು ವಿಷಯ ಹೇಳಿತ್ತು, ಶಿವ ಮತ್ತು ಪಾರ್ವತಿ ಏಕಾಂತದಲ್ಲಿ ಕಾಲ ಕಳೆಯುವಾಗ ಅಗ್ನಿದೇವ  ಪ್ರವೇಶಿಸಿ ಏಕಾಂತಕ್ಕೆ ಅಡಿ ಮಾಡಿದ ಎಂಬ ಕಾರಣಕ್ಕೆ ಈ ರೀತಿ ಮರವಾಗಿ ಹೋದ ಎಂಬ ಪುರಾಣ ಕಥೆ ಹೇಳಿ, ಬೆಳಗಿನಿಂದ ಕಟ್ಟಿದ ಎಲೆಗಳನ್ನು ಮಾರಾಟ ಮಾಡಲು ಹೋದ ಅಜ್ಜಿಯ ನೆನಪು ಇನ್ನು ಹಾಗೆ ಉಳಿದಿದೆ. ಎಷ್ಟೇ ಅಧುನಿಕವಾದರು ಇಂತಹ ಎಷ್ಟೋ ವಿಚಾರಗಳು ನಮ್ಮ ಮಂಕು ತಲೆಗಳಿಗೆ ತಿಳಿದಿರುವುದಿಲ್ಲ ನೋಡಿ :)
ಮುತ್ತುಗದ ಹೂವು ವಿಶೇಷ ಅಷ್ಟೇ ಎಂದು ಅಂದುಕೊಂಡ ನನಗೆ ಅದರ ನಿಜವಾದ ವಿಶೇಷತೆಗಳು ಮಲೆನಾಡು ಮತ್ತು ಆಯುರ್ವೇದ ಪಂಡಿತರಿಂದ ಗೊತಾಗಿದು. ಇದರ ತೊಗಟೆ, ಬೇರು, ಅಂಟು ಇದರಲ್ಲಿ ಔಷದಿಯ ಗುಣವಿದೆ ಹಾಗು ಅದೆಷ್ಟೋ ಚರ್ಮ ರೋಗಕ್ಕೆ ಇದು ಉಪ್ಪಯುಕ್ತ ಎಂದು. ಇದರ ಬೀಜದಿಂದ ತಯಾರಿಸುವ ಎಣ್ಣೆಗೆ ಮಾರುಕಟ್ಟೆಯಲ್ಲಿ demand ಜಾಸ್ತಿ ಇದೆ ಎಂದು ತಿಳಿಯಿತು.

ಬೇಸಿಗೆಯ ಬಿಸಿಲಲ್ಲಿ ಕಾಡಿನ ಒಳಗೆ ಈ ಹೂವುಗಳ ದರ್ಬಾರು ನೋಡಬೇಕು , ನಿಜವಾಗಿಯೂ ರಮಣೀಯ ದೃಶ್ಯ ಅದು, ಇಡಿ ಕಾಡಿಗೆ ಬೆಂಕಿ ಬಿದ್ದ ಹಾಗೆ ಗೋಚರಿಸುತ್ತದೆ. ಈ ಹೂವು ಅನೇಕ ಪಕ್ಷಿಗಳಿಗೆ ಕೀಟಗಳಿಗೆ ಬೆಸಿಗಿಯೇ ಆಹಾರ. ಬಾಲ್ಯದಿಂದಲೂ ಈ ಹೂವು ಕಂಡಾಗ ಅದೇನೋ ಸಂತೋಷ, ಬೆಂಕಿಯಂತೆ ಹೊಳೆಯುವ ಆ ಹೂವುಗಳ ಚಿತ್ರ ಬಿಡಿಸುವ ಹುಚ್ಚು. ರಾಮನಗರದಲ್ಲಿ ಟ್ರೆಕಿಂಗ್ ಮುಗಿಸಿ ಬರುವಾಗ ಕರಡಿ ಅಟ್ಟಿಸಿಕೊಂಡು ಬಂದು ಓಡುವಾಗ ಕೆಳಗೆ ಬಿದ್ದು ಮುತ್ತುಗದ ಮರ ತಬ್ಬಿ ಕುಳಿತಿದೆ, ಕರಡಿ ಹಿಡಿದು ಜಗ್ಗಾಡಿ, ಗುದ್ದಿ , ಪರಚಿ ಪಕ್ಕಕೆ ಎಸೆದಾಗ ಕಡೆಯದಾಗಿ ನನಗೆ ಕಂಡದು ಈ ಹೂವುಗಳೇ. ಇವತ್ತಿಗೂ ಈ ಹೂವು ಕಂಡಾಗ ಮೈ ಜುಮ್ಮ್ ಎನಿಸುವುದು.